” ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ,”
ರಾಮಾಯಣ ಮಹಾಕಾವ್ಯ- ಮಾನವೀಯತೆಯ ಮಹತ್ವ ಸಾರುವ ಸಂದೇಶ : ಎಸ್ ಮಧು ಬಂಗಾರಪ್ಪ.
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಮಹರ್ಷಿ ವಾಲ್ಮೀಕಿಯವರು ರಚಿಸಿರುವ ‘ರಾಮಾಯಣ’ ಮಹಾಕಾವ್ಯವು ಕೇವಲ ಒಂದು ಧಾರ್ಮಿಕ ಗ್ರಂಥವಲ್ಲ; ಅದೊಂದು ಮಾನವೀಯತೆಯ ಸಂದೇಶವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್. ಮಧು ಬಂಗಾರಪ್ಪ ತಿಳಿಸಿದರು.
ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ
ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಅತಿ ಹೆಚ್ಚು ಭಾಷೆಗಳಲ್ಲಿ ಹಾಗೂ ದೇಶಗಳಲ್ಲಿ ಅನುವಾದಗೊಂಡಿರುವ ಹಾಗೂ ಓದಲ್ಪಟ್ಟ ವಾಲ್ಮೀಕಿ ಮಹರ್ಷಿಗಳ ರಾಮಾಯಣ ಗ್ರಂಥವು ಇಡೀ ವಿಶ್ವಕ್ಕೆ ಮಾನವೀಯತೆಯ ಮಹತ್ವದ ಸಂದೇಶವನ್ನು ಸಾರುತ್ತದೆ.
ಸಮಾಜದಲ್ಲಿ ಸತ್ಕಾರ್ಯಗಳನ್ನು ಮಾಡುವ, ಉತ್ತಮ ವಿಚಾರಗಳನ್ನು ಬಿತ್ತುವ ಮಹಾನ್ ವ್ಯಕ್ತಿಗಳ ಹಾಗೂ ಪುಣ್ಯಾತ್ಮರ ಜಯಂತಿಗಳನ್ನು ಆಚರಿಸುವುದು ನಮಗೆಲ್ಲರಿಗೂ ಅತ್ಯಂತ ಖುಷಿಯ ಹಾಗೂ ಹೆಮ್ಮೆಯ ಸಂಗತಿಯಾಗಿದೆ.
ಇಂದಿನ ಸಮಾಜದಲ್ಲಿ ಮಾನವೀಯತೆಯನ್ನು ಮುಂಚೂಣಿಯಲ್ಲಿಟ್ಟುಕೊಂಡು ಹೋದರೆ ಮಾತ್ರ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನಕ್ಕೆ ನಿಜವಾದ ಗೌರವ ಸಲ್ಲುತ್ತದೆ. ನ್ಯಾಯಾಲಯಗಳಲ್ಲಿ ಮತ್ತು ಸರ್ಕಾರದ ಹಂತದಲ್ಲಿಯೂ ಕೂಡ ಸಂವಿಧಾನ ಹಾಗೂ ಕಾನೂನಿನ ಅಡಿಯಲ್ಲಿ ಎಲ್ಲರಿಗೂ ಸಮಾನ ನ್ಯಾಯ ಮತ್ತು ಗೌರವವನ್ನು ತಂದುಕೊಡುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಶಿಕ್ಷಣಕ್ಕೆ ಒತ್ತು ಮತ್ತು ಸರ್ಕಾರದ ಬದ್ಧತೆ: ಪ್ರತಿಯೊಂದು ಮಗು ಹುಟ್ಟಿದ ಮೇಲೆ ಅದಕ್ಕೆ ಸಂಪೂರ್ಣ ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯಂತ ಮುಖ್ಯವಾದ ಕರ್ತವ್ಯವಾಗಿದೆ. ಶಿಕ್ಷಣ ಸಚಿವನಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದು,ಸರ್ಕಾರದ ಹಂತದಲ್ಲಿಯೂ ಸಮಾಜದ ಎಲ್ಲ ವರ್ಗದವರಿಗೂ ಹಾಗೂ ಸಂಕಷ್ಟದಲ್ಲಿರುವವರಿಗೂ ಧ್ವನಿಯಾಗಿ ನಿಲ್ಲುವ ವಿಶ್ವಾಸವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ ಅವರು ಇಂತಹ ವೇದಿಕೆಗಳೇ ಭಾರತದ ಭವಿಷ್ಯ ಎತ್ತಿ ಹಿಡಿಯುವ ವೇದಿಕೆಗಳಾಗಿದ್ದು, ಸರ್ಕಾರವೂ ಸಹ ಜೊತೆ ನಿಲ್ಲಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಸಂಸದರಾದ ಬಿ.ವೈ.ರಾಘವೇಂದ್ರ ಮಾತನಾಡಿ, ರಾಮಾಯಣ ಮಹಾಕಾವ್ಯವನ್ನು ರಚಿಸಿದ ಮಹಾಕವಿ ಮಹರ್ಷಿ ವಾಲ್ಮೀಕಿ ಅವರು ಕೇವಲ ಒಂದು ಕಾವ್ಯಕ್ಕೆ ಮಾತ್ರ ಸೀಮಿತರಾಗದೆ, ಸರ್ವಕಾಲಿಕ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ಮಾರ್ದರ್ಶಕರು.
ಮಹರ್ಷಿ ವಾಲ್ಮೀಕಿಗಳ ಜೀವನದಲ್ಲಿ ನಡೆದ ಘಟನೆಗಳನ್ನು ಸ್ಮರಿಸುತ್ತಾ, ಅವರು ಬೇಟೆಗಾರರಾಗಿ ಬದುಕು ಆರಂಭಿಸಿ, ಬಳಿಕ ತಮ್ಮ ಜೀವನದಲ್ಲಿ, ಪರ್ಯಾಯ ಬದಲಾವಣೆಗಳನ್ನು ತಂದುಕೊಂಡು ಒಂದು ಪಕ್ಷಿಯ ವಧೆಯಿಂದ ತಮ್ಮ ಮನಸ್ಸಿನಲ್ಲಿ ಆದ ಬದಲಾವಣೆಯ ಮೂಲಕ ಸಮಾಜಕ್ಕೆ ಜ್ಞಾನ ಮತ್ತು ಮಾನವೀಯತೆಯ ಸಂದೇಶವನ್ನು ರಾಮಾಯಣದ ಮೂಲಕ ನೀಡಿದರು. ರಾಮಾಯಣದಲ್ಲಿ ಬರುವ ಸೀತೆ, ಉರ್ಮಿಳಾ ಹಾಗೂ ಕೌಸಲ್ಯೆಯಂತಹ ಪಾತ್ರಗಳ ಮೂಲಕ ಸ್ತ್ರೀ ಶಕ್ತಿಯ ಇತಿಹಾಸ ಮತ್ತು ಸಂದೇಶವನ್ನು ಸಮಾಜಕ್ಕೆ ತಿಳಿಸುವ ಕೆಲಸವನ್ನು ಅವರ ಸಾಹಿತ್ಯ ಮಾಡಿದೆ.
ವಾಲ್ಮೀಕಿ ಜಯಂತಿ ಕೇವಲ ಒಂದು ಸಮಾಜದ ಆಚರಣೆಯಾಗಿರದೆ, ಎಲ್ಲಾ ಜನಾಂಗದವರು ಜಯಂತಿಯನ್ನು ಆಚರಿಸಬೇಕು. ಮಹರ್ಷಿ ವಾಲ್ಮೀಕಿಯವರ ಸಾಹಿತ್ಯ ಮತ್ತು ತತ್ವಗಳು ಇಂದಿಗೂ ಜೀವಂತವಾಗಿದ್ದು, ಧರ್ಮ ಹಾಗೂ ಮಾನವೀಯತೆಯ ಹುಡುಕಾಟಕ್ಕೆ ದಾರಿದೀಪವಾಗಿವೆ ಎಂದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದುಳಿದ ಜಾತಿಗಳಿಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ಬುಡಕಟ್ಟು ಸಮುದಾಯಗಳು ನೆಲೆಸಿರುವೆಡೆ ಮೂಲಸೌಕರ್ಯಕ್ಕಾಗಿ ರೂ. ೮೦ ಸಾವಿರ ಕೋಟಿ ನೀಡಲಾಗಿದೆ.
ಮೆಟ್ರಿಕ್ ಪೂರ್ವ, ಮೆಟ್ರಕ್ ನಂತರದ ಹಾಗೂ ಉನ್ನತ ವ್ಯಾಸಂಗ ಕ್ಕಾಗಿ ವಸತಿ ನಿಲಯಗಳ ಸ್ಥಾಪನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಶಾಸಕರಾದ ಎಸ್ ಎನ್ ಚನ್ನಬಸಪ್ಪ ಮಾತನಾಡಿ, ವಾಲ್ಮೀಕಿ ರಾಮಾಯಣ ಕೇವಲ ಗ್ರಂಥವಲ್ಲ. ಮಾನವ ವ್ಯಕ್ತಿತ್ವಗಳ ದರ್ಶನವಾಗಿದೆ. ಎಲ್ಲವನ್ನು ವಿಮರ್ಶೆ ಗೊಳಪಡಿಸಿ, ಒಪ್ಪಿಕೊಳ್ಳುವ ಮಾನಸಿಕತೆ ನಮ್ಮ ದೇಶದಲ್ಲಿದೆ. ಶ್ರೀ ರಾಮ ಹುಟ್ಟಿದ ಬಗ್ಗೆಯೇ ಸಾಕ್ಷಿ ಕೇಳಿದ ಪ್ರಸಂಗ ನಮ್ಮ ದೇಶದಲ್ಲಿದ್ದು, ವಿಮರ್ಶೆ ಗೊಳಪಡಿಸಿದ ಪರಿಣಾಮವೇ ಶ್ರೀ ರಾಮ ಎಂದಿಗೂ ಶ್ರೇಷ್ಠ ಮತ್ತು ಮಾದರಿ ಮಹಾಪುರುಷರಾಗಿ ಉಳಿದಿದ್ದಾರೆ. ರಾಮನ ಆದರ್ಶ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಚೇತನಗಳಿಗೆ ನಮಿಸುತ್ತಾ, ಅವರ ತತ್ವಗಳನ್ನು ಅಳವಡಿಸಿಕೊಂಡು ನಾವು ಮುಂದೆ ಸಾಗಬೇಕೆಂದರು.

ವಿಶೇಷ ಉಪನ್ಯಾಸ :
ಹೊಸನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಖ್ಯೋಪಾಧ್ಯಾಯ ಡಾ. ಜಿ. ಸುಧಾಕರ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಋಷಿ ಅಲ್ಲದವನು ಕವಿಯಾಗಲಾರ, ಕವಿಯಾದವನು ಋಷಿಯೇ ಆಗಿರಬೇಕು ಎಂಬ ಬಲವಾದ ನಂಬಿಕೆ ಪ್ರಾಚೀನ ಕಾಲದಲ್ಲಿತ್ತು” ಜಗತ್ತಿನಲ್ಲಿ ಋಷಿಗಳು ಮತ್ತು ಕವಿಗಳು ಅನೇಕರಿದ್ದರೂ, ಮಹಾಕವಿಯಾಗಿ ಹಾಗೂ ಮಹಾಋಷಿಯಾಗಿರತಕ್ಕಂತಹ ಏಕೈಕ ಮಹಾನ್ ಚೇತನ ಮಹರ್ಷಿ ವಾಲ್ಮೀಕಿ ಮಾತ್ರ.
ಬುಧ ಕೌಶಿಕ ಮುನಿ ಬರೆದಿರುವ ‘ಶ್ರೀ ರಾಮ ರಕ್ಷಾ ಸ್ತೋತ್ರ’ದಲ್ಲಿ ವಾಲ್ಮೀಕಿ ಮಹರ್ಷಿಗಳ ಕುರಿತು ವಿಶೇಷ ಉಲ್ಲೇಖವಿದ್ದು, ರಾಮಾಯಣ ಮಹಾಕಾವ್ಯದ ಮಹತ್ವವನ್ನು ಇದು ಸಾರುತ್ತದೆ. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಆನಂದವರ್ಧನರ ಮೀಮಾಂಸೆಯಂತೆ, ವಾಲ್ಮೀಕಿ ರಾಮಾಯಣ ಮತ್ತು ಮಹರ್ಷಿ ವಾಲ್ಮೀಕಿ ಈ ಭುವನದ ಭಾಗ್ಯ ಎಂದು ರಾಷ್ಟ್ರಕವಿ ಕುವೆಂಪು ಸೇರಿದಂತೆ ಹಲವು ಸಾಹಿತಿಗಳು ಪ್ರಶಂಸಿಸಿದ್ದಾರೆ.
ವಾಲ್ಮೀಕಿ ಮಹರ್ಷಿಗಳ ವ್ಯಕ್ತಿತ್ವ, ಕಾವ್ಯ ಶಕ್ತಿ ಹಾಗೂ ರಾಮಾಯಣದ ತತ್ವ-ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಹರ್ಷಿ ವಾಲ್ಮೀಕಿ ಜಯಂತಿಗೆ ನಿಜವಾದ ಅರ್ಥ ಕಲ್ಪಿಸಬೇಕಾಗಿದೆ.
ಬುಡಕಟ್ಟು ಪಂಗಡ ಗಳು ರೂಪುಗೊಂಡ ಹಾಗೂ ವಾಲ್ಮೀಕಿಯವರ ಬಗ್ಗೆ ಸಂಶೋಧನೆಗಳು ಆಗಬೇಕು. ವಾಲ್ಮೀಕಿ ಪೀಠ ವು ಹೆಚ್ಚೆಚ್ಚು ಸಂಶೋಧನೆಗಳನ್ನು ನಡೆಸಬೇಕು, ವಾಲ್ಮೀಕಿಯವರಿಗೆ ಬಂದ ಕಳಂಕವನ್ನು ತೊಡೆದುಹಾಕಬೇಕಿದೆ.
ರಾಮಾಯಣವನ್ನು ಮಕ್ಕಳು ಪಾರಾಯಣ ಮಾಡದಿದ್ದಲ್ಲಿ ಅದು ಕೇವಲ ಪುರಾಣವಾಗಿ, ವಾಲ್ಮೀಕಿಯವರ ಕಾವ್ಯಶಕ್ತಿ ಮಸುಕಾಗುತ್ತದೆ. ವಾಲ್ಮೀಕಿ ಜಗತ್ತು ಕಂಡ ಶ್ರೇಷ್ಟ ದಾರ್ಶನಿಕ. ಉತ್ತಮ ಶಿಕ್ಷಣ ತಜ್ಞ, ಸಮಾಜ ಸುಧಾರಕ. ಅವರ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕಿದೆ ಎಂದರು.

ಪರಿಶಿಷ್ಟ ಪಂಗಡಕ್ಕೆ ಶೇ. 7 ಮೀಸಲಾತಿ ನೀಡಬೇಕೆಂದು ಇದೇ ವೇಳೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ, ಪಿಯುಸ, ಪದವಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಸನ್ಮಾನಿಸಲಾಯಿತು.ಹಾಗೂ
ಅಂರ್ತಜಾತಿ ವಿವಾಹವಾದ ದಂಪತಿಗಳಿಗೆ ಪ್ರೋತ್ಸಾಹ ಧನ ಸೌಲಭ್ಯ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಪರಿಶಿಷ್ಟ ಜಾತಿ, ವರ್ಗಗಳು, ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ ಮಾತನಾಡಿದರು.
ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್, ಸೂಡಾ ಅಧ್ಯಕ್ಷ ಮಧುಸೂದನ್,
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ,
ಜಿ.ಪಂ.ಸಿಇಓ ರಿಷಿ ಆನಂದ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ,
ಜಿಲ್ಲಾ ಪರಿಶಿಷ್ಟ ವರ್ಗಗಳ
ಕಲ್ಯಾಣಾಧಿಕಾರಿ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್,
ವಿವಿಧ ಇಲಾಖೆಗಳ ಅಧಿಕಾರಿಗಳು, ಹಿಂದುಳಿದ ವರ್ಗಗಳ, ವಿವಿಧ ಸಂಘಟನೆಗಳ ಮುಖಂಡರು, ಹಾಜರಿದ್ದರು.


