ಆಂಧ್ರಪ್ರದೇಶ : ಬೆಂಗಳೂರು ಪಬ್ ಗಲಾಟೆ ಕೇಸ್: IAS ಅಧಿಕಾರಿ ವಿಕಾಸ್ ಮರ್ಮತ್ ವರ್ಗಾವಣೆ.

news.ashwasurya.in
ಅಶ್ವಸೂರ್ಯ/ಬೆಂಗಳೂರು: ಬೆಂಗಳೂರಿನ ಪಬ್ನಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಐಎಎಸ್ ಅಧಿಕಾರಿ ವಿಕಾಸ್ ಮರ್ಮತ್ ಅವರನ್ನು ಆಂಧ್ರಪ್ರದೇಶ ಸರ್ಕಾರ ವರ್ಗಾವಣೆ ಮಾಡಿದೆ. ಕುಪ್ಪಂ ಏರಿಯಾ ಡೆವಲಪ್ಮೆಂಟ್ ಅಥಾರಿಟಿಯ (KADA) ಪ್ರಾಜೆಕ್ಟ್ ಡೈರೆಕ್ಟರ್ ಆಗಿದ್ದ ಈ ಐಎಎಸ್ ಅಧಿಕಾರಿಯನ್ನು ಸಾಮಾನ್ಯ ಆಡಳಿತ ಇಲಾಖೆಗೆ (GAD) ವರದಿ ಮಾಡಿಕೊಳ್ಳುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ.
2019ರ ಬ್ಯಾಚ್ನ ಐಎಎಸ್ ಅಧಿಕಾರಿ ಮರ್ಮತ್ ವರ್ಗಾವಣೆ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಆಂಧ್ರಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಜಿ. ಸಾಯಿ ಪ್ರಸಾದ್ ಆದೇಶದಲ್ಲಿ ತಿಳಿಸಿದ್ದಾರೆ. ಅವರ ಸ್ಥಾನಕ್ಕೆ ಮುಂದಿನ ನೇಮಕಾತಿ ಆಗುವವರೆಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಚಿತ್ತೂರು ಜಿಲ್ಲಾಧಿಕಾರಿಗೆ ಸೂಚನೆ ಕೊಡಲಾಗಿದೆ.
ಬೆಂಗಳೂರಿನ ಪಬ್ನಲ್ಲಿ ನಡೆದಿದ್ದೇನು?
ಅಕ್ಟೋಬರ್ 10ರಂದು ತಡರಾತ್ರಿ ಸುಮಾರು 1.30ರ ವೇಳೆಗೆ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ಪಬ್ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಬಾರ್ಗಳು ಮತ್ತು ರೆಸ್ಟೋರೆಂಟ್ಗಳಲ್ಲಿ ತಪಾಸಣೆ ನಡೆಸುತ್ತಿದ್ದ ಪೊಲೀಸರ ತಂಡ, ಗ್ರಾಹಕರ ವಯಸ್ಸನ್ನು ಖಚಿತಪಡಿಸಿಕೊಳ್ಳಲು ಗುರುತಿನ ಚೀಟಿ ತೋರಿಸುವಂತೆ ಕೇಳಿತ್ತು. ಈ ವೇಳೆ ವಿಕಾಸ್ ಮರ್ಮತ್ ಮತ್ತು ಅವರೊಂದಿಗೆ ಇದ್ದವರ ನಡುವೆ ಪೊಲೀಸರೊಂದಿಗೆ ವಾಗ್ವಾದ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಪೊಲೀಸ್ ಇನ್ಸ್ಪೆಕ್ಟರ್ ಅರುಣ್ ಸಾಲುಂಕೆ ನೀಡಿದ ದೂರಿನ ಪ್ರಕಾರ, ಗುಂಪಿನಲ್ಲಿದ್ದವರು ಪೊಲೀಸರನ್ನು ನಿಂದಿಸಿದ್ದಾರೆ, ಹಲ್ಲೆ ನಡೆಸಿದ್ದಾರೆ ಹಾಗೂ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಮರ್ಮತ್ ಸೇರಿದಂತೆ ನಾಲ್ವರ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತರ ಆರೋಪಿಗಳನ್ನು ಅಭಯ್ ಉದಯ್ ಸಿಂಗ್, ನಿತೇಶ್ ಮತ್ತು ರೋಷನ್ ಎಂದು ಗುರುತಿಸಲಾಗಿದೆ.

ಐದು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ
ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS), 2023ರ ಐದು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇವು ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು, ಕ್ರಿಮಿನಲ್ ಬೆದರಿಕೆ, ಉದ್ದೇಶಪೂರ್ವಕ ಅವಮಾನ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಲು ಹಲ್ಲೆ ಅಥವಾ ಬಲಪ್ರಯೋಗ ಹಾಗೂ ಸಾಮಾನ್ಯ ಉದ್ದೇಶದಿಂದ ಕೃತ್ಯ ಎಸಗುವುದಕ್ಕೆ ಸಂಬಂಧಿಸಿವೆ.
ಪಬ್ನಲ್ಲಿ ನಡೆದಿತ್ತೆನ್ನಲಾದ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಪ್ರಕರಣದ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಚಂದ್ರಬಾಬು ನಾಯ್ಡು ಗಂಭೀರ ನೋಟ
ಈ ಘಟನೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಗಂಭೀರವಾಗಿ ಗಮನಹರಿಸಿದ್ದು, ಅವರ ಸೂಚನೆಯ ಮೇರೆಗೆ ಮರ್ಮತ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ಮರ್ಮತ್ ಅವರು ಕುಪ್ಪಂ ಏರಿಯಾ ಡೆವಲಪ್ಮೆಂಟ್ ಅಥಾರಿಟಿಯ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಚಿತ್ತೂರು ಜಿಲ್ಲೆಯ ಕುಪ್ಪಂ ಕ್ಷೇತ್ರವು ಚಂದ್ರಬಾಬು ನಾಯ್ಡು ಅವರ ವಿಧಾನಸಭಾ ಕ್ಷೇತ್ರವಾಗಿದೆ.
ಬೆಂಗಳೂರಿನಲ್ಲಿ ದಾಖಲಾಗಿರುವ ಪ್ರಕರಣದ ಬೆನ್ನಲ್ಲೇ ಈ ವರ್ಗಾವಣೆ ನಡೆದಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಮರ್ಮತ್ ವಿರುದ್ಧ ಕೇಳಿಬಂದಿರುವ ಆರೋಪಗಳು ತನಿಖೆಯ ಹಂತದಲ್ಲಿವೆ.


