ಸುಪ್ರೀಂ ಆದೇಶ ತಿರುಚಿ ಕೈದಿ ಬಿಡುಗಡೆ! ಅಪರಾಧಿ ಪತ್ನಿ ಜತೆ ಲೈಂಗಿಕ ಸಂಪರ್ಕ? ಹಿಂಡಲಗಾ ಜೈಲಿನ ಅಧಿಕಾರಿ ಸೆರೆ.
ಆ ಸಮಯದಲ್ಲಿ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿದ್ದ ಈಗಿನ ಡಿಐಜಿ ಸೋಮಶೇಖರ್ ಶಂಕರ್ ಬಿಡುಗಡೆಗೆ ಸಹಕರಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅವರನ್ನು ಕೋರ್ಟ್ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲಾಗಿದ್ದು ತನಿಖೆ ಮುಂದುವರೆದಿದ್ದು ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ….

news.ashwasurya.in
ಅಶ್ವಸೂರ್ಯ/ ಬೆಂಗಳೂರು: ಸುಪ್ರೀಂಕೋರ್ಟ್ನ ನಕಲಿ ಆದೇಶ ಪತ್ರ ಸೃಷ್ಟಿಸಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಬಿಡುಗಡೆಗೆ ಸಹಕರಿಸಿದ ಆರೋಪದಲ್ಲಿ ಬೆಳಗಾವಿ ಹಿಂಡಲಗಾ ಜೈಲಿನ ಡಿಐಜಿ ಸೋಮಶೇಖರ್ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ಬಿಡುಗಡೆಗೆ ನೆರವು ನೀಡಲು ಅಪರಾಧಿ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪವೂ ಸೋಮಶೇಖರ್ ವಿರುದ್ಧ ಕೇಳಿಬಂದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಜೀವಾವಧಿ ಸಜಾಬಂಧಿ ತಮಿಳುನಾಡು ಮೂಲದ ಅಪರಾಧಿ ಎ. ಶಂಕರ್ನನ್ನು ಸುಪ್ರೀಂ ಕೋರ್ಟ್ ನಕಲಿ ಆದೇಶ ಪ್ರತಿ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು. ಆಗ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿದ್ದ ಈಗಿನ ಡಿಐಜಿ ಸೋಮಶೇಖರ್ ಶಂಕರ್ ಬಿಡುಗಡೆಗೆ ಸಹಕರಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅವರನ್ನು ಕೋರ್ಟ್ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ.

ಶಂಕರ್ ಅಪಹರಣ ಹಾಗೂ ಸುಲಿಗೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ 2004ರ ಜುಲೈ 12ರಂದು ಶಿಕ್ಷೆಗೆ ಒಳಗಾಗಿದ್ದ. ಕೆಲ ದಿನ ಶಿಕ್ಷೆ ಅನುಭವಿಸಿದ ಆತ, ಶಿಕ್ಷೆ ರದ್ದುಗೊಳಿಸುವಂತೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದ. ಆದರೆ ಎರಡೂ ಕಡೆ ವಿಚಾರಣಾ ನ್ಯಾಯಾಲಯದ ತೀರ್ಪನ್ನೇ ಪುರಸ್ಕರಿಸಿ ಜೀವಾವಧಿ ಶಿಕ್ಷೆ ಕಾಯಂಗೊಳಿಸಿ ಆದೇಶಿಸಲಾಗಿತ್ತು. ಆದರೆ, ಸುಪ್ರೀಂಕೋರ್ಟ್ ಕ್ರಿಮಿನಲ್ ಮೇಲ್ಮನವಿಯನ್ನು ಪುರಸ್ಕರಿಸಿ ಬಿಡುಗಡೆಗೆ ಆದೇಶಿಸಿದೆ ಎಂದು ನಕಲಿ ಆದೇಶ ಪ್ರತಿಯನ್ನು ಸೃಷ್ಟಿಸಿ, ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಕಲು ಆದೇಶ ಪ್ರತಿ ಸೃಷ್ಟಿಯಾಗಿದ್ದು ಹೇಗೆ?
ಕೇಂದ್ರ ಕಾರಾಗೃಹದ ಶಿಕ್ಷಾ ಬಂಧಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂದಿನ ದ್ವಿತೀಯ ದರ್ಜೆ ನೌಕರ (ಎಸ್ಡಿಎ) ಎಸ್.ಶ್ರೀಕಾಂತ್ ಎಂಬಾತ 2018ರ ನ.2ರಂದು ಅಪರಾಧಿ ಶಂಕರ್ನನ್ನು ಸುಪ್ರೀಂಕೋರ್ಟ್ ಬಿಡುಗಡೆಗೆ ಆದೇಶಿಸಿದೆ ಎಂದು ಬಿಂಬಿಸುವ ನಕಲಿ ಆದೇಶ ಪತ್ರವನ್ನು ಸೃಷ್ಟಿಸಿದ್ದ. ಈ ಅಕ್ರಮ ಪ್ರಕರಣ ಬೆಳಕಿಗೆ ಬಂದಾಗ ಅಪರಾಧಿ ಶಂಕರ್ ಪತ್ನಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಆಗ ಜೈಲಿನ ಮುಖ್ಯ ಅಧೀಕ್ಷಕರಾಗಿದ್ದ ಸೋಮಶೇಖರ್ ಬಿಡುಗಡೆಗೆ ಸಹಕರಿಸಿದ್ದರು ಎಂದು ಶಂಕರ್ ಪತ್ನಿ ಹೇಳಿಕೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಡಿಐಜಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಸೋಮಶೇಖರ್ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಅ.4ರಂದು ಬಂಧಿಸಲಾಗಿದೆ. ಎಸ್ಡಿಎ ಶ್ರೀಕಾಂತ್ನನ್ನೂ ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ಮುಂದುವರೆದಿದೆ.

6 ತಿಂಗಳ ಹಿಂದೆಯೇ ಶಂಕರ್ ಬಂಧನ:
ಜೈಲಿನಿಂದ ಬಿಡುಗಡೆಯಾಗಿದ್ದ ಶಂಕರ್ ತಮಿಳುನಾಡಿಗೆ ಹೋಗಿದ್ದ. ಇತ್ತೀಚೆಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ಆರಂಭಿಸಿದಾಗ ಶಂಕರ್ ಮೈಸೂರಿನಲ್ಲಿರುವ ಮಾಹಿತಿ ಸಿಕ್ಕಿತ್ತು. 6 ತಿಂಗಳ ಹಿಂದೆಯೇ ಆತನನ್ನು ಬಂಧಿಸಲಾಗಿತ್ತು.
ಪತ್ನಿ ಮೇಲೆ ಲೈಂಗಿಕ ದೌರ್ಜನ್ಯ:
ಆರೋಪಿ ಸ್ಥಾನದಲ್ಲಿರುವ ಜೈಲು ಸಿಬ್ಬಂದಿ ಮತ್ತು ಅಧಿಕಾರಿಗಳು, ಅಪರಾಧಿ ಶಂಕರ್ ಬಿಡುಗಡೆಗೆ ದೊಡ್ಡ ಷಡ್ಯಂತ್ರ ರೂಪಿಸಿದ್ದು, ಸಜಾಬಂಧಿಯ ಪತ್ನಿಯನ್ನು ಲೈಂಗಿಕ ವಾಗಿ ಬಳಸಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಕೈದಿ ಪತ್ನಿಯೇ ಪೊಲೀಸರ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಡಿಐಜಿಗೆ ಪೊಲೀಸರ ಡ್ರಿಲ್.!
ಅಪರಾಧಿ ಶಂಕರ್ ಬಿಡುಗಡೆಗೆ ಸಹಕಾರ ಕೊಟ್ಟಿದ್ದು ಯಾಕೆ? ಈ ಅಕ್ರಮ ಕೃತ್ಯದಲ್ಲಿ ಕಾರಾಗೃಹ ಇಲಾಖೆಯ ಬೇರೆ ಯಾರಾದರು ಭಾಗಿಯಾಗಿದ್ದಾರೆಯೇ? ಸೇರಿ ಇನ್ನಿತರ ವಿಚಾರಗಳ ಬಗ್ಗೆ ಸೋಮಶೇಖರ್ ಅವರಿಂದ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಖಾಕಿ ಕಳ್ಳಾಟ ಬಯಲಾಗಿದ್ದು ಹೇಗೆ?
ಜೈಲಿನಿಂದ ಶಂಕರ್ ಬಿಡುಗಡೆಯಾದ ಕೆಲ ವರ್ಷದ ಬಳಿಕ ಕಾರಾಗೃಹ ಇಲಾಖೆಗೆ ಅನಾಮಧೇಯ ಪತ್ರ ಬಂದಿತ್ತು. ಆ ಪತ್ರದಲ್ಲಿ ಶಂಕರ್ ಎಂಬ ಕೈದಿ ನಕಲಿ ದಾಖಲೆ ನೀಡಿ ಜೈಲಿಂದ ಬಿಡುಗಡೆಯಾಗಿದ್ದಾನೆ ಎಂದು ಬರೆಯಲಾಗಿತ್ತು. ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ಜೈಲು ಇಲಾಖೆ ಅಧಿಕಾರಿಗಳು, ಆಂತರಿಕ ತನಿಖೆಗೆ ಆದೇಶಿಸಿದ್ದರು. ತನಿಖೆ ವೇಳೆ ಸುಪ್ರೀಂಕೋರ್ಟ್ ನಿಂದ ಯಾವುದೇ ಬಿಡುಗಡೆ ಆದೇಶ ಬಂದಿಲ್ಲ ಎಂಬುದು ತಿಳಿಯುತ್ತಿದ್ದಂತೆ ಸಂಭಂದಪಟ್ಟ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದರು


