Headlines

ಬೆಂಗಳೂರು : ಅಂದು ಸೈಕಲ್‌ನಲ್ಲಿ ಬೆಣ್ಣೆ ಮಾರಟ ಮಾಡಿದ ಹುಡುಗ.! ಇಂದು 1000 ಕೋಟಿ ಒಡೆಯ.!! GRB ತುಪ್ಪದ ಯಶೋಗಾಥೆ.

ಅಶ್ವಸೂರ್ಯ/ಹೊಸೂರು : ಬದುಕಿನಲ್ಲಿ ಏನನ್ನಾದರೂ ಸಾಧಿಸಿಯೇ ತೀರಬೇಕು ಎನ್ನುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ. ಕೇವಲ ಹದಿಮೂರನೇ ವಯಸ್ಸಿಗೆ ಬಡತನದ ಸುಳಿಯಲ್ಲಿ ಸಿಲುಕಿದ ಹುಡಿಗನೊಬ್ಬ ಶಾಲೆಯನ್ನು ಬಿಟ್ಟು, ಸೈಕಲ್‌ನಲ್ಲಿ ಮನೆ ಮನೆಗೆ ತೆರಳಿ ಬೆಣ್ಣೆ ಮಾರಾಟ ಮಾಡುತ್ತಾ ಬದುಕು ಕಟ್ಟಿಕೊಳ್ಳಲು ಹೋರಾಟ ಆರಂಭಿಸಿದ್ದ.ಅದೆ ಹುಡುಗ ಇಂದು 1,000 ಕೋಟಿಗೂ ಅಧಿಕ ಮೌಲ್ಯದ ಬೃಹತ್ ಉದ್ಯಮವನ್ನು ಕಟ್ಟಿ ಇಂದು
ಜಿಆರ್‌ಬಿ ಡೈರಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ (GRB Dairy Foods Pvt Ltd) ಸಂಸ್ಥೆಯು ಹೊಸೂರಿನ ಸಿಪ್ಕೋಟ್ (SIPCOT) ಕೈಗಾರಿಕಾ ಪ್ರದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ತನ್ನ ಮುಖ್ಯ ಉತ್ಪಾದನಾ ಘಟಕಗಳನ್ನು (Factories) ಹೊಂದಿದ್ದು ದೊಡ್ಡ ಮಟ್ಟದಲ್ಲಿ ಬೆಳೆದುನಿಂತಿದೆ ಎಂದರೆ ನೀಮಗೆ ಆಶ್ಚರ್ಯವಾಗಬಹುದು ಅದರು ಸತ್ಯ.!

ಹೌದು, ಅವರೇ ಇಂದು ಭಾರತದಾದ್ಯಂತ ಮನೆಮಾತಾಗಿರುವ ಜನಪ್ರಿಯ ‘ಜಿಆರ್‌ಬಿ ಡೈರಿ ಫುಡ್ಸ್’ ಅದರಲ್ಲೂ ಜನಪ್ರಿಯ ಜಿಆರ್‌ಬಿ ತುಪ್ಪದ ಸಂಸ್ಥಾಪಕ ಜಿ.ಆರ್. ಬಾಲಸುಬ್ರಮಣ್ಯಂ. ಎಲ್ಲಿಂದ ನಮ್ಮ ಪಯಣ ಪ್ರಾರಂಭಿಸಿದೆವು ಎಂಬುದಕ್ಕಿಂತ, ಎಷ್ಟು ಪ್ರಾಮಾಣಿಕವಾಗಿ ನಾವು ನಮ್ಮ ಗುರಿಯತ್ತ ಮುನ್ನಡೆಯುತ್ತೇವೆ ಎಂಬುದು ಯಶಸ್ಸಿಗೆ ಮುಖ್ಯ ಕಾರಣ ಎಂಬುದನ್ನು ಇವರ ಜೀವನ ಪಯಣವೇ ಎಲ್ಲರಿಗೂ ಸಾರಿ ಸಾರಿ ಹೇಳುತ್ತಿದೆ.
ತಮಿಳುನಾಡಿನ ಪಳನಿ ಸಮೀಪದ ಚಿನ್ನಕರಟ್ಟುಪಟ್ಟಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಬಾಲಸುಬ್ರಮಣ್ಯಂ ಅವರು ಬಾಲ್ಯದಲ್ಲಿ ಬಹಳ ಕಷ್ಟಗಳನ್ನ ಎದುರಿಸಿದ್ದರು. ಬಡತನದ ಕಾರಣದಿಂದ 13ನೇ ವಯಸ್ಸಿಗೆ ಶಾಲೆಗೆ ವಿದಾಯ ಹೇಳಬೇಕಾಯಿತು. ಹೊಟ್ಟೆಪಾಡಿಗಾಗಿ ತಮ್ಮ ಹಳ್ಳಿಯನ್ನು ತೊರೆದು, ಊರು ಬಿಟ್ಟು ಬೆಂಗಳೂರಿನಲ್ಲಿದ್ದ ಸಂಬಂಧಿಕರೊಬ್ಬರ ಬೆಣ್ಣೆ ವ್ಯಾಪಾರದ ಅಂಗಡಿಯಲ್ಲಿ ಕೆಲಸ ಮಾಡಲು ಬಂದರು.
ಸುಮಾರು 14 ವರ್ಷಗಳ ಕಾಲ ಅದೇ ಅಂಗಡಿಯಲ್ಲಿ ಅತ್ಯಂತ ನಿಷ್ಠೆಯಿಂದ ಕೆಲಸ ಮಾಡಿದರು. ಈ ಸಮಯದಲ್ಲಿ ಅವರು ಬೆಣ್ಣೆಯ ಗುಣಮಟ್ಟವನ್ನ ತಿಳಿಯುವುದು, ರೈತರಿಂದ ನೇರವಾಗಿ ಖರೀದಿಸುವುದು, ಗ್ರಾಹಕರೊಂದಿಗೆ ಉತ್ತಮ ಒಡನಾಟ ಬೆಳೆಸುವುದು ಮತ್ತು ಕಷ್ಟದ ಲೆಕ್ಕಾಚಾರಗಳನ್ನ ನಿರ್ವಹಿಸುವುದನ್ನು ಅವರು ಅರಿತುಕೊಂಡರು.
ಈ ಸುದೀರ್ಘವಾದ ಅನುಭವವೇ ಮುಂದೊಂದು ದಿನ ಅವರು ದೊಡ್ಡ ಮಟ್ಟದ ಉದ್ಯಮಿಯಾಗಿ ಬೆಳೆಯಲು ಭದ್ರವಾದ ಅಡಿಪಾಯ ಹಾಕಿಕೊಟ್ಟಿತು.

ಜಿ.ಆರ್. ಬಾಲಸುಬ್ರಮಣ್ಯಂ ಅವರ ಜಿಆರ್‌ಬಿ ಬ್ಯುಸಿನೆಸ್ ಜರ್ನಿ: ಸೈಕಲ್ ಮೇಲೆ ವ್ಯಾಪಾರ
ಹದಿನಾಲ್ಕು ವರ್ಷಗಳ ಸತತ ದುಡಿಮೆಯ ನಂತರ, ಸ್ವಂತವಾಗಿ ಏನನ್ನಾದರೂ ಸಾಧಿಸಬೇಕು ಎನ್ನುವುದು ಅವರ ಮನಸ್ಸಲ್ಲಿ ಮೂಡಿತು. ಆದರೆ, ಆಗ ಅವರ ಬಳಿ ದೊಡ್ಡ ಬಂಡವಾಳವಿರಲಿಲ್ಲ. ತಮ್ಮ ಪರಿಚಯಸ್ಥರ ಬಳಿ ಹಣ ಹೊಂದಿಸಿ, ಕೇವಲ 50 ಸಾವಿರ ರೂಪಾಯಿಗಳೊಂದಿಗೆ ತಮ್ಮದೇ ಆದ ಪುಟ್ಟ ವ್ಯಾಪಾರ ಶುರು ಮಾಡಿದರು.
ಕೇವಲ 10×20 ಅಳತೆಯ ಒಂದು ಚಿಕ್ಕ ಬಾಡಿಗೆ ಅಂಗಡಿಯನ್ನು ತೆರೆದರು. ಯಾವುದೇ ಹಿನ್ನೆಲೆ ಅಥವಾ ದೊಡ್ಡವರ ಸಂಪರ್ಕಗಳಿಲ್ಲದೆ ಆರಂಭವಾದ ಈ ವ್ಯಾಪಾರದಲ್ಲಿ, ಸೈಕಲ್ ಮೇಲೆ ಬೆಂಗಳೂರಿನಾದ್ಯಂತ ಮನೆಮನೆಗೆ ತೆರಳಿ ಬೆಣ್ಣೆ ಮಾರಾಟ ಮಾಡುವುದನ್ನ ಅವರು ಮುಂದುವರಿಸಿದರು. ಗ್ರಾಹಕರ ನಾಡಿಮಿಡಿತವನ್ನು ಚೆನ್ನಾಗಿ ಅರಿತಿದ್ದ ಅವರು, ಹಗಲಿರುಳು ಶ್ರಮಿಸಿ ತಮ್ಮ ವ್ಯಾಪಾರವನ್ನ ಹಂತ ಹಂತವಾಗಿ ವಿಸ್ತರಿಸುತ್ತಾ ಹೋದರು.
ಜಿಆರ್‌ಬಿ ತುಪ್ಪದ ಗುಣಮಟ್ಟ ಮತ್ತು ನಂಬಿಕೆ
ಯಾವುದೇ ಬ್ಯುಸಿನೆಸ್ ಯಶಸ್ವಿಯಾಗಲು ಮತ್ತು ಗ್ರಾಹಕರ ವಿಶ್ವಾಸ ಗಳಿಸಲು ಅದರ ಗುಣಮಟ್ಟವೇ ತುಂಬ ಮುಖ್ಯವಾಗಿರುತ್ತದೆ. ಬಾಲಸುಬ್ರಮಣ್ಯಂ ಅವರು ಎಂದಿಗೂ ಗುಣಮಟ್ಟದ ವಿಚಾರದಲ್ಲಿ ಸ್ವಲ್ಪವೂ ರಾಜಿ ಮಾಡಿಕೊಳ್ಳಲಿಲ್ಲ. ಆರಂಭದಲ್ಲಿ ತಾವು ತಯಾರಿಸಿದ ತುಪ್ಪದ ಬಾಟಲಿಗಳ ಮೇಲೆ ತಮ್ಮದೇ ಹೆಸರಿನ ಮೊದಲ ಅಕ್ಷರಗಳಾದ G.R.B (ಗೋಪಾಲ್ ರಾಮಸ್ವಾಮಿ ಬಾಲಸುಬ್ರಮಣ್ಯಂ) ಎಂಬ ಸರಳ ಸ್ಟಿಕ್ಕರ್‌ ಅನ್ನು ಅಂಟಿಸಿ ಮಾರಾಟ ಮಾಡಲು ಶುರು ಮಾಡಿದರು.
ಶುದ್ಧ ತುಪ್ಪ ಮತ್ತು ಅದರ ಅಪ್ಪಟ ರುಚಿ ಬಹುಬೇಗ ಗ್ರಾಹಕರ ಮನಗೆದ್ದಿತು. ಯಾವುದೇ ದೊಡ್ಡ ಜಾಹೀರಾತುಗಳ ಬೆಂಬಲವಿಲ್ಲದೆ, ಕೇವಲ ಗುಣಮಟ್ಟ ಮತ್ತು ಬಾಯಿಂದ ಬಾಯಿಗೆ ಹರಡಿದ ಪ್ರಚಾರದ ಕಾರಣದಿಂದ ಜಿಆರ್‌ಬಿ ಹೆಸರು ಎಲ್ಲೆಡೆ ಮನೆಮಾತಾಯಿತು. ಕಷ್ಟದ ದಿನಗಳಲ್ಲಿ ಅವರ ಪತ್ನಿಯ ಬೆಂಬಲವೇ ಅವರಿಗೆ ಆನೆಬಲ ನೀಡಿತ್ತು.

ಇಂದು 1000 ಕೋಟಿ ರೂಪಾಯಿ ಬ್ಯುಸಿನೆಸ್ ಸಾಮ್ರಾಜ್ಯ
ಒಂದು ಸಣ್ಣ ಐಡಿಯಾ ಮತ್ತು ಬಾಲಸುಬ್ರಮಣ್ಯಂ ಅವರ ಸತತ ಪ್ರಯತ್ನ ಇಂದು ಜಿಆರ್‌ಬಿ ಸಂಸ್ಥೆಯನ್ನ ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಸೈಕಲ್‌ನಲ್ಲಿ ಆರಂಭವಾದ ಈ ಪಯಣ, ಇಂದು 2,500ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಆಶ್ರಯ ನೀಡಿದೆ.
ಇಂದು ಜಿಆರ್‌ಬಿ ಉತ್ಪನ್ನಗಳು ಕೇವಲ ಭಾರತ ಮಾತ್ರವಲ್ಲದೆ, ವಿಶ್ವದ 40ಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗುತ್ತಿವೆ. ಕಂಪನಿಯು 1,000 ಕೋಟಿ ರೂಪಾಯಿಗೂ ಅಧಿಕ ಆದಾಯ ಹೊಂದಿರುವ ಬೃಹತ್ ಸಾಮ್ರಾಜ್ಯವಾಗಿ ಬೆಳೆದು ನಿಂತಿದೆ. ಕೇವಲ ತುಪ್ಪ ಮಾತ್ರವಲ್ಲದೆ, ಮಸಾಲೆ ಪದಾರ್ಥಗಳು, ಸಿಹಿತಿಂಡಿಗಳು ಮತ್ತು ಐಸ್‌ಕ್ರೀಮ್ ಉದ್ಯಮದಲ್ಲೂ ಕಂಪನಿ ತನ್ನ ಶಕ್ತಿ ಎನೇನ್ನೂವುದನ್ನು ತೋರಿಸಿದೆ ಜಿಆರ್‌ಬಿ ತುಪ್ಪ ಮನೆ ಮಾತಾಗಿರುವುದಂತು ಸತ್ಯ.

Leave a Reply

Your email address will not be published. Required fields are marked *

Optimized by Optimole
error: Content is protected !!