ತೀರ್ಥಹಳ್ಳಿ ಗುಡ್ಡ ಕುಸಿತ : ಇಬ್ಬರು ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ಶ್ರೀಹುಚ್ಚೇಶ್ವರ ಶಾಲೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದ ಗುಡ್ಡ ಕುಸಿತ ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಕಕ್ಕರಗೋಳ ಗ್ರಾಮದ ಇಬ್ಬರು ಮಕ್ಕಳಿಗೆ ಬೂದಗುಂಪಾ ಗ್ರಾಮದ ಶ್ರೀಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆ ಆಸರೆಯಾಗಿದೆ. ಶಾಲೆಯು ಮಕ್ಕಳ 8ನೇ ತರಗತಿಯವರೆಗಿನ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತುಕೊಂಡು ಮಾನವೀಯತೆ ಮೆರೆದಿದೆ ….
ಅಶ್ವಸೂರ್ಯ/ಕೊಪ್ಪಳ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಆ.2ರಂದು ನಡೆದ ಗುಡ್ಡ ಕುಸಿತ ದುರಂತದಲ್ಲಿ ಅಕಾಲಿಕ ಮೃತಪಟ್ಟ ತಾಲೂಕಿನ ಕಕ್ಕರಗೋಳ ಗ್ರಾಮದ ಕಾರ್ಮಿಕ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸಮೀಪದ ಬೂದಗುಂಪಾ ಗ್ರಾಮದ ಶ್ರೀಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮುಂದಾಗಿದೆ.
ದುರಂತದಲ್ಲಿ ಕಕ್ಕರಗೋಳದ ಮಲ್ಲಿಕಾರ್ಜುನ ಕಟಗಿ, ಪತ್ನಿ ನಾಗವೇಣಿ ಕಟಗಿ ಹಾಗೂ 3 ವರ್ಷದ ಮಗು ಸಂತೋಷ್ ಮೃತಪಟ್ಟಿದ್ದರು. ಬದುಕಿನ ಬಂಡಿ ಸಾಗಿಸಲು ಕೂಲಿ ಕೆಲಸಕ್ಕೆ ತೆರಳಿದ್ದ ಕುಟುಂಬ ತೀರ್ಥಹಳ್ಳಿಯಲ್ಲಿ ತಾತ್ಕಾಲಿಕ ಶೆಡ್ನಲ್ಲಿ ವಾಸವಾಗಿತ್ತು. ತಡರಾತ್ರಿ 2.30ಕ್ಕೆ ಗುಡ್ಡ ಕುಸಿದು ಈ ದುರ್ಘಟನೆ ಸಂಭವಿಸಿತು.
ಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆ ಮೃತ ಕಾರ್ಮಿಕ ಮಲ್ಲಿಕಾರ್ಜುನ ಕಟಗಿಯವರ ಮನೆಗೆ ಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆ ಬೂದಗುಂಪಾದ ಕಾರ್ಯದರ್ಶಿ ಸಂತೋಷ್ ಕುಮಾರ್ ಜಿ. ಎರಕಲ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾತನಾಡಿದ ಅವರು, ಬಡ ಕುಟುಂಬವೊಂದು ದುಡಿಮೆ ಅರಸಿ ಹೊರಟು ದುರಂತ ಅಂತ್ಯ ಕಂಡಿರುವುದು ದುರ್ದೈವ. ಹೀಗಾಗಿ ಅಕಾಲಿಕ ಮೃತ್ಯುವಿಗೆ ಬಲಿಯಾದ ಕಾರ್ಮಿಕನ ಮಕ್ಕಳಾದ ಮಹಾಲಕ್ಷ್ಮೀ ಹಾಗೂ ದಿವ್ಯಗೆ ತಮ್ಮ ಶಾಲೆಯಲ್ಲಿ 8ನೇ ತರಗತಿಯವರೆಗೂ ಉಚಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಕಟಿಸಿದರು.
ಶಾಲೆಯ ಶಿಕ್ಷಕರು, ಕಕ್ಕರಗೋಳ ಗ್ರಾಮದ ನಿವಾಸಿಗಳಾದ ನರಸಿಂಹ, ಈರಪ್ಪ ರೌಡಕುಂದಿ, ಜಡಿಯಪ್ಪ ಕಾರಟಗಿ, ಬಸವರಾಜ ಛಲವಾದಿ, ಪಂಪಾಪತಿ ಜಲ್ಲಿ, ಭೀಮಣ್ಣ ಕಟಿಗೇರು ಇದ್ದರು.


