ಸಂಪುಟ ವಿಸ್ತರಣೆಗೆ ತಕ್ಷಣ ಗಣನೆ : ಸಿದ್ದರಾಮಯ್ಯ – ಡಿಕೆ ಶಿವಕುಮಾರ್ , ಹರಿಪ್ರಸಾದ್’ಗೆ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ಬುಲಾವ್, ದೆಹಲಿಯಲ್ಲಿ ನಿರ್ಣಾಯಕ ಸಭೆ..!ಅ 20 ಸಚಿವರು ಯಾರು.?
news.ashwasurya.in
ಜೂನ್ 3ರಂದು ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿ 13 ಸಚಿವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ್ದರು. ಸದ್ಯ ರಾಜ್ಯ ಸಚಿವ ಸಂಪುಟದಲ್ಲಿ 20 ಸಚಿವ ಸ್ಥಾನಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಚಾಲನೆಗೆ ವೇದಿಕೆ ಸಿದ್ಧವಾಗಿದೆ…
ಅಶ್ವಸೂರ್ಯ/ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದ ರಾಜಕೀಯ ಚಟುವಟಿಕೆಗಳು ಮತ್ತೆ ವೇಗ ಪಡೆದಿವೆ. ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸ ಮುಗಿಸಿ ಭಾರತಕ್ಕೆ ಮರಳುತ್ತಿದ್ದಂತೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ದೆಹಲಿಗೆ ಕರೆಸಿ ಮಹತ್ವದ ಸಭೆ ನಡೆಸುವ ಸಾಧ್ಯತೆ ಇದೆ.

ಸಂಪುಟದಲ್ಲಿರುವ 20 ಖಾಲಿ ಸಚಿವ ಸ್ಥಾನಗಳ ಭರ್ತಿ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇರುವುದರಿಂದ ಸಚಿವಾಕಾಂಕ್ಷಿಗಳ ಚಟುವಟಿಕೆ ತೀವ್ರಗೊಂಡಿದೆ.
ಜೂನ್ 3ರಂದು ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿ 13 ಸಚಿವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ್ದರು. ಸದ್ಯ ರಾಜ್ಯ ಸಚಿವ ಸಂಪುಟದಲ್ಲಿ 20 ಸಚಿವ ಸ್ಥಾನಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ವಿಳಂಬವಾಗಿದ್ದು ಈಗ ಚಾಲನೆ ಸಿಗುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಬಿ.ಕೆ. ಹರಿಪ್ರಸಾದ್ ಅವರು ತಮ್ಮ ತಮ್ಮ ಬೆಂಬಲಿಗ ಶಾಸಕರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದು, ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮುಂದೆ ಪ್ರಸ್ತಾಪಿಸಲು ಸಜ್ಜಾಗಿದ್ದಾರೆಂದು ತಿಳಿದುಬಂದಿದೆ.
ಮತ್ತೊಂದೆಡೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ಕೂಡ 2028ರ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಆಯ್ಕೆಯ ನಾಯಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪ್ರತ್ಯೇಕ ಚಿಂತನೆ ನಡೆಸಿದೆ ಎನ್ನಲಾಗಿದೆ.

ಸಂಪುಟ ವಿಸ್ತರಣೆ ಆಷಾಢ ಮಾಸ ಆರಂಭವಾಗುವ ಮೊದಲು ನಡೆಯುತ್ತದೆಯೇ ಎಂಬ ಕುತೂಹಲ ಕಾಂಗ್ರೆಸ್ ಶಾಸಕರಲ್ಲಿ ಹೆಚ್ಚಿದೆ.
ಅನೇಕರು ಆಷಾಢವನ್ನು ಶುಭಕಾರ್ಯಗಳಿಗೆ ಸೂಕ್ತವಲ್ಲದ ಸಮಯ ಎಂದು ನಂಬುತ್ತಾರೆ. ಹೀಗಾಗಿ ಆಷಾಡಕ್ಕೂ ಮುನ್ನವೇ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳಿವೆ ಎಂದು ಶಾಸಕರು ನಂಬಿದ್ದು, ಸಚಿವ ಸ್ಥಾನಕ್ಕಾಗಿ ಲಾಬಿ ಹೆಚ್ಚಾಗತೊಡಗಿದೆ. ಈ ಬಾರಿ ಆಷಾಢ ಮಾಸ ಜುಲೈ 14ರಿಂದ ಆರಂಭವಾಗುತ್ತಿದೆ.

ಈ ನಡುವೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ಸಂಪುಟ ವಿಸ್ತರಣೆ ಶೀಘ್ರದಲ್ಲೇ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.


