ಎದೆ ಝಲ್ಲೆನಿಸುವಂತಿದೆ ಉತ್ತರಪ್ರದೇಶದಲ್ಲಿ ನೆಡೆದ ಈ ಅಪಘಾತ.ವೈರಲ್ ವಿಡಿಯೋ ನೋಡಿ.
ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಸಿಹೋರಿ ಟೋಲ್ ಪ್ಲಾಜಾದಲ್ಲಿ ಎಲ್‌ಪಿಜಿ (LPG) ಗ್ಯಾಸ್ ಟ್ಯಾಂಕರ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಭೀಕರವಾಗಿ ಸ್ಫೋಟಗೊಂಡಿದೆ.ಜೂನ್ 26 ರಂದು ನಡೆದ ಈ ದಿಗಿಲುಗೊಳಿಸುವ ಅಪಘಾತದ ಸಿಸಿಟಿವಿ (CCTV) ದೃಶ್ಯಾವಳಿಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಈ ದುರಂತದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ…
news.ashwasurya.in
ಅಶ್ವಸೂರ್ಯ/ಉತ್ತರಪ್ರದೇಶ : ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಕೋಖ್‌ರಾಜ್‌ನಲ್ಲಿರುವ ಸಿಹೋರಿ ಟೋಲ್ ಪ್ಲಾಜಾದಲ್ಲಿ ಜೂನ್ 26ರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತ ಮತ್ತು ಅಗ್ನಿ ಅವಘಡದ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣ ಸೃಷ್ಟಿಸಿವೆ. ನಿಯಂತ್ರಣ ತಪ್ಪಿದ ಎಲ್‌ಪಿಜಿ ಟ್ಯಾಂಕರ್ ಪ್ಲಾಜಾಕ್ಕೆ ನುಗ್ಗಿದ ಪರಿಣಾಮ ಭಾರಿ ಸ್ಫೋಟ ಸಂಭವಿಸಿದ್ದು, ಸದ್ಯ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಪ್ರಯಾಗ್‌ರಾಜ್-ಕಾನ್ಪುರ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ.!
ಕಾನ್ಪುರದಿಂದ ಸುಮಾರು 18 ಟನ್ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ಹೊತ್ತು ಸಾಗುತ್ತಿದ್ದ ಟ್ಯಾಂಕರ್, ಮುಂಜಾನೆ 7 ಗಂಟೆಯ ಸುಮಾರಿಗೆ ಸಿಹೋರಿ ಟೋಲ್ ಪ್ಲಾಜಾ ತಲುಪಿದ್ದಾಗ ಈ ಅವಘಡ ಸಂಭವಿಸಿದೆ. ಲಘು ಮಳೆಯಿಂದಾಗಿ ರಸ್ತೆ ಒದ್ದೆಯಾಗಿದ್ದರಿಂದ ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡಲು ಯತ್ನಿಸಿದ ಟ್ಯಾಂಕರ್ ಹಠಾತ್ತಾಗಿ ನಿಯಂತ್ರಣ ಕಳೆದುಕೊಂಡಿದೆ. ಮೊದಲು ರಸ್ತೆ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದ ಟ್ಯಾಂಕರ್, ಬಳಿಕ ನೇರವಾಗಿ ಟೋಲ್ ಬೂತ್‌ಗಳಿಗೆ ನುಗ್ಗಿ ಪಲ್ಟಿಯಾಗಿದೆ.
ಡಿಕ್ಕಿಯ ತೀವ್ರತೆಗೆ ಟ್ಯಾಂಕರ್‌ನಿಂದ ತಕ್ಷಣವೇ ಗ್ಯಾಸ್ ಸೋರಿಕೆಯಾಗಲಾರಂಭಿಸಿದೆ. ಕೇವಲ ಕೆಲವೇ ಸೆಕೆಂಡುಗಳಲ್ಲಿ, ಸಮೀಪದಲ್ಲಿದ್ದ ಜನರೇಟರ್‌ನಿಂದ ಹೊರಬಂದ ಕಿಡಿಯಿಂದಾಗಿ ಇಡೀ ಗ್ಯಾಸ್ ಹರಡಿಕೊಂಡು ಭೀಕರವಾಗಿ ಸ್ಫೋಟಗೊಂಡಿದೆ. ಬೆಂಕಿಯ ಜ್ವಾಲೆ ಮತ್ತು ದಟ್ಟವಾದ ಕಪ್ಪು ಹೊಗೆ ಸುಮಾರು ಎರಡು ಕಿಲೋಮೀಟರ್ ದೂರದವರಿಗೂ ಕಾಣಿಸುತ್ತಿತ್ತು. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ನಡುಗಿಸುವಂತಿತ್ತು.
ಈ ದುರಂತದಲ್ಲಿ ಟೋಲ್ ಪ್ಲಾಜಾದ ಮೂವರು ಉದ್ಯೋಗಿಗಳಾದ ಆಲೋಕ್ ಸಿಂಗ್, ಹೀರ ಮಣಿ ಸಿಂಗ್ ಮತ್ತು ಕೃಷ್ಣಪಾಲ್ ಮೌರ್ಯ ಅವರು ತೀವ್ರ ಸುಟ್ಟ ಗಾಯಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮತ್ತೊಂದು ಶವ ವಾಹನದ ಕ್ಯಾಬಿನ್‌ನಲ್ಲಿ ಪತ್ತೆಯಾಗಿದ್ದು, ಚಾಲಕನ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಸ್ತುತ, ತೀವ್ರವಾಗಿ ಗಾಯಗೊಂಡಿರುವ ಇನ್ನಿಬ್ಬರು ಟೋಲ್ ಸಿಬ್ಬಂದಿ ಪ್ರಯಾಗ್‌ರಾಜ್‌ನ ಸ್ವರೂಪ್ ರಾಣಿ ನೆಹರು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಕಿಯ ಕೆನ್ನಾಲಿಗೆಗೆ ಇಡೀ ಟೋಲ್ ಪ್ಲಾಜಾ ಧ್ವಂಸಗೊಂಡಿರುವುದಲ್ಲದೆ, ಉದ್ಯೋಗಿಗಳ ವಾಹನ ನಿಲುಗಡೆ ಜಾಗದಲ್ಲಿದ್ದ ಕನಿಷ್ಠ 16 ಮೋಟಾರ್ ಸೈಕಲ್‌ಗಳು ಮತ್ತು ಎರಡು ಕಾರುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಪರಿಶ್ರಮದ ನಂತರ ಬೆಂಕಿಯನ್ನು ಹತೋಟಿಗೆ ತಂದಿದ್ದರು.


