Headlines

ಇಂಗ್ಲೆಂಡ್ : ಅವತ್ತೇ ಬಿಟ್ಟಿಲ್ಲ, ಇವತ್ತು ಬಿಡ್ತಾನಾ? ವೈಭವ್ ಸೂರ್ಯವಂಶಿ ಬಗ್ಗೆ ಇಂಗ್ಲೆಂಡ್‌ ಬೌಲರ್‌ಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಮಾಜಿ ಕ್ರಿಕೆಟಿಗ.

Vaibhav Sooryavanshi
ಅಶ್ವಸೂರ್ಯ/ಇಂಗ್ಲೆಂಡ್ :
ಭಾರತ ಹಾಗೂ ಇಂಗ್ಲೆಂಡ್ ನಡುವೆ ಜುಲೈ 1ರಿಂದ ಟಿ20 ಸರಣಿ ಆರಂಭವಾಗಲಿದೆ. ಟೀಮ್ ಇಂಡಿಯಾ ಪರ 15 ವರ್ಷದ ವೈಭವ್ ಸೂರ್ಯವಂಶಿ ಅವರು ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂಗ್ಲೆಂಡ್‌ನ ಮಾಜಿ ಕ್ರಿಕೆಟರ್‌ ತಮ್ಮ ದೇಶದ ಪರ ಆಡುವ ಆಟಗಾರರಿಗೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದ್ದಾರೆ.

ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಅವರು ಭಾರತದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಬಗ್ಗೆ ಇಂಗ್ಲೆಂಡ್ ಬೌಲಿಂಗ್ ಪಡೆಗೆ ಎಚ್ಚರಿಕೆ ನೀಡಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿಗೂ ಮುನ್ನ ಮಾತನಾಡಿದ ಅವರು, ಈ ಯುವ ಎಡಗೈ ಬ್ಯಾಟರ್ ಇಂಗ್ಲೆಂಡ್ ಬೌಲರ್‌ಗಳಿಗೆ ಅತ್ಯಂತ ಕಠಿಣ ಸವಾಲಾಗಲಿದ್ದಾರೆ ಎಂದು ಹೇಳಿದ್ದಾರೆ.
ಇಂಗ್ಲೆಂಡ್‌ ಬೌಲರ್‌ಗಳಿಗೆ ಎಚ್ಚರಿಕೆ ಸಂದೇಶ
ಜಿಯೋಸ್ಟಾರ್‌ನೊಂದಿಗೆ ಮಾತನಾಡಿದ ಅವರು, ‘ವೈಭವ್ ಸೂರ್ಯವಂಶಿ ವಿರುದ್ಧ ಯೋಜನೆ ರೂಪಿಸುವುದು ಅಥವಾ ಸಿದ್ಧತೆ ನಡೆಸುವುದು ಬೌಲರ್‌ಗಳಿಗೆ ತುಂಬಾ ಕಷ್ಟಕರ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹೊಸಬರಾಗಿದ್ದರೂ, ಈಗಾಗಲೇ ಎರಡು ಐಪಿಎಲ್ ಸೀಸನ್‌ಗಳಲ್ಲಿ ಆಕ್ರಮಣಕಾರಿ ಆಟ ಆಡಿದ್ದಾರೆ. ಬ್ಯಾಟಿಂಗ್‌ನ ವಿಡಿಯೋ ತುಣುಕುಗಳು ಲಭ್ಯವಿವೆ ಮತ್ತು ಇಂಗ್ಲೆಂಡ್‌ನ ಕೆಲವು ಬೌಲರ್‌ಗಳು ಐಪಿಎಲ್‌ನಲ್ಲಿ ಅವರಿಗೆ ಬೌಲಿಂಗ್ ಕೂಡ ಮಾಡಿರಬಹುದು,’ ಎಂದು ಹೇಳಿದ್ದಾರೆ.
ಯಾವ ಬೌಲರ್‌ಗೂ ಬಿಡದೆ ಬೆಂಡೆತ್ತಿದ್ದ ವೈಭವ್
ಲಭ್ಯವಿರುವ ವಿಡಿಯೋಗಳನ್ನ ನೋಡಿದರೂ ಸಹ, ಈ ಯುವ ಬ್ಯಾಟರ್ ಅನ್ನು ಹೇಗೆ ಔಟ್ ಮಾಡಬೇಕು ಎಂಬುದಕ್ಕೆ ಇಂಗ್ಲೆಂಡ್ ತಂಡದ ಬಳಿ ಯಾವುದೇ ನಿಖರವಾದ ಬ್ಲೂಪ್ರಿಂಟ್ ಇಲ್ಲ ಎಂದು ಸ್ವಾನ್ ಅಭಿಪ್ರಾಯಪಟ್ಟಿದ್ದಾರೆ. ‘ವಾಸ್ತವ ಏನೆಂದರೆ, ಈವರೆಗೆ ಅವರ ವಿರುದ್ಧ ಯಾವುದೇ ಬೌಲರ್ ಹೆಚ್ಚಿನ ಯಶಸ್ಸನ್ನು ಸಾಧಿಸಿಲ್ಲ. ಕ್ರೀಸ್‌ನಲ್ಲಿ ಅವರು ಬೌಲರ್‌ಗಳಿಗೆ ಆಡಲು ಅಸಾಧ್ಯ ಎನ್ನುವ ರೀತಿಯಲ್ಲಿ ಕಾಣಿಸುತ್ತಿದ್ದಾರೆ,’ ಎಂದು ಹೇಳಿದ್ದಾರೆ.

ಆರ್ಚರ್ Vs ವೈಭವ್ ಸೂರ್ಯವಂಶಿ
‘ಇಂಗ್ಲೆಂಡ್‌ನ ವೇಗದ ಬೌಲಿಂಗ್ ಆಯ್ಕೆಗಳ ಪೈಕಿ, ಜೋಫ್ರಾ ಆರ್ಚರ್ ಮಾತ್ರ ವೈಭವ್ ಸೂರ್ಯವಂಶಿಗೆ ಸ್ವಲ್ಪ ಮಟ್ಟಿನ ಸವಾಲೊಡ್ಡಬಹುದು. ಆರ್ಚರ್ ಐಪಿಎಲ್‌ನಲ್ಲಿ ಆಡಿರುವುದರಿಂದ ಯುವ ಆಟಗಾರನ ಆಟದ ಶೈಲಿಯ ಬಗ್ಗೆ ತಿಳಿದುಕೊಂಡಿದ್ದಾರೆ,’ ಎಂದು ಹೇಳಿದ್ದಾರೆ.
‘ಈ ಪರಿಚಯ ಮತ್ತು ಅನುಭವದ ಕಾರಣದಿಂದ ಆರ್ಚರ್‌ಗೆ ಸಣ್ಣ ಅನುಕೂಲ ಆಗಬಹುದು. ಬಹುಶಃ ಆರ್ಚರ್ ಆ ಯುವ ಆಟಗಾರನಲ್ಲಿ ಏನಾದರೂ ದೌರ್ಬಲ್ಯವನ್ನು ಪತ್ತೆಹಚ್ಚಿರಬಹುದು. ಅವರ ಬಳಿ ಒಂದು ನಿರ್ದಿಷ್ಟ ಯೋಜನೆಯೂ ಇರಬಹುದು. ಜೊತೆಗೆ ಅದಕ್ಕೆ ತಕ್ಕಂತೆ ಅತಿ ವೇಗವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯವೂ ಆರ್ಚರ್ ಬಳಿ ಇದೆ,’ ಎಂದು ಸ್ವಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆದರೂ ಸಹ ವಿಶ್ವದ ಅಗ್ರಗಣ್ಯ ಬೌಲರ್‌ಗಳ ವಿರುದ್ಧ ವೈಭವ್ ಹೊಂದಿರುವ ಅತ್ಯುತ್ತಮ ದಾಖಲೆಯನ್ನು ನೋಡಿದರೆ ಇಂಗ್ಲೆಂಡ್ ತಂಡಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂದು ಎಚ್ಚರಿಸಿದ್ದಾರೆ. ‘ಇದುವರೆಗೆ ಸೂರ್ಯವಂಶಿ ಅವರಿಗೆ ಯಾರು ಬೌಲಿಂಗ್ ಮಾಡಿದರೂ, ಆ ಬೌಲರ್ ಎಷ್ಟೇ ಅನುಭವಿಯಾಗಿದ್ದರೂ, ಆ ಯುವ ಆಟಗಾರ ಪ್ರತಿ ಬಾರಿ ತನ್ನ ಬ್ಯಾಟಿಂಗ್ ಮೂಲಕ ಅದಕ್ಕೆ ತಕ್ಕ ಉತ್ತರ ನೀಡಿದ್ದಾನೆ,’ ಎಂದು ಸ್ವಾನ್ ಎಚ್ಚರಿಕೆ ನೀಡಿದ್ದಾರೆ.
ಐಪಿಎಲ್ 2026ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ 776 ರನ್ ಸಿಡಿಸಿ ಮತ್ತು ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ 175 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿರುವ ವೈಭವ್ ಸೂರ್ಯವಂಶಿ ಅವರ ಮೇಲೆ ಸದ್ಯ ಇಡೀ ಕ್ರಿಕೆಟ್ ಜಗತ್ತಿನ ಕಣ್ಣು ನೆಟ್ಟಿದೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವರ ಪ್ರದರ್ಶನ ಹೇಗಿರಲಿದೆ ಎಂಬುದು ಇದೀಹ ಕುತೂಹಲ ಮೂಡಿಸಿರುವ ಸಂಗತಿಯಾಗಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!