Headlines

ಬೆಂಗಳೂರು : ಡಿ.ಕೆ. ಶಿವಕುಮಾರ್ ಸಂಪುಟದ ಮಂತ್ರಿಗಳಿಗೆ ಜಿಲ್ಲೆಗಳ ಉಸ್ತುವಾರಿ ಹಂಚಿಕೆ;ಯಾವ ಜಿಲ್ಲೆಗೆ ಯಾರು.?

ಅಶ್ವಸೂರ್ಯ/ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ, ಸಂಭವನೀಯ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಪರಿಹಾರ ಕಾರ್ಯಗಳ ಮೇಲ್ವಿಚಾರಣೆಗಾಗಿ ಮುಖ್ಯಮಂತ್ರಿಗಳು ಸಚಿವರಿಗೆ ಜಿಲ್ಲಾವಾರು ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು (ಜೂ.25): ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಾಗಿದ್ದು, ಇದೀಗ ಚುರುಕುಗೊಂಡಿದೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸಲು ಸಚಿವರುಗಳಿಗೆ ಜಿಲ್ಲಾವಾರು ಜವಾಬ್ದಾರಿಯನ್ನು ಹಂಚಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಸಚಿವರ ದಂಡು:
ಜೂನ್ 24ರಂದು ಹೊರಡಿಸಲಾದ ಈ ಸರ್ಕಾರಿ ಅಧಿಸೂಚನೆಯಂತೆ, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವಿವಿಧ ಜಿಲ್ಲೆಗಳ ಮೇಲ್ವಿಚಾರಣಾ ಜವಾಬ್ದಾರಿಯನ್ನು ನೀಡಲಾಗಿದೆ. ಪ್ರವಾಹ, ಅತಿವೃಷ್ಟಿ ಅಥವಾ ಇನ್ಯಾವುದೇ ನೈಸರ್ಗಿಕ ವಿಕೋಪಗಳು ಸಂಭವಿಸಿದಲ್ಲಿ ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸಿ, ಜನರಿಗೆ ತಕ್ಷಣ ಸ್ಪಂದಿಸುವುದು ಈ ಸಚಿವರ ಮುಖ್ಯ ಕೆಲಸವಾಗಿದೆ.

ಯಾವ ಸಚಿವರಿಗೆ ಯಾವ ಜಿಲ್ಲೆ? (ಪ್ರಮುಖ ಹಂಚಿಕೆಗಳು):
ಡಾ. ಜಿ. ಪರಮೇಶ್ವರ: ತುಮಕೂರು ಮತ್ತು ಚಿತ್ರದುರ್ಗ
ಕೆ.ಹೆಚ್. ಮುನಿಯಪ್ಪ: ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಮತ್ತು ವಿಜಯನಗರ
ರಾಮಲಿಂಗಾರೆಡ್ಡಿ: ಬೆಂಗಳೂರು ದಕ್ಷಿಣ ಮತ್ತು ಮಂಡ್ಯ
ಎಂ.ಬಿ. ಪಾಟೀಲ್: ವಿಜಯಪುರ ಮತ್ತು ಬಾಗಲಕೋಟೆ
ಕೆ.ಜೆ. ಜಾರ್ಜ್: ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ
ಕೃಷ್ಣ ಬೈರೇಗೌಡ: ಬೆಂಗಳೂರು ನಗರ ಮತ್ತು ಹಾಸನ
ಈಶ್ವರ್ ಖಂಡ್ರೆ: ಬೀದರ್ ಮತ್ತು ಗದಗ
ಸತೀಶ್ ಜಾರಕಿಹೊಳಿ: ಬೆಳಗಾವಿ, ಧಾರವಾಡ ಮತ್ತು ಹಾವೇರಿ.

ಪ್ರಿಯಾಂಕ್ ಖರ್ಗೆ: ಕಲಬುರಗಿ ಮತ್ತು ಯಾದಗಿರಿ
ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್: ರಾಯಚೂರು ಮತ್ತು ಕೊಪ್ಪಳ
ಯು.ಟಿ. ಖಾದರ್ ಫರೀದ್: ಉಡುಪಿ, ಕೊಡಗು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ
ಭೈರತಿ ಸುರೇಶ್: ಕೋಲಾರ ಮತ್ತು ಚಿಕ್ಕಬಳ್ಳಾಪುರ
ಡಾ. ಯತೀಂದ್ರ ಸಿದ್ದರಾಮಯ್ಯ: ಮೈಸೂರು ಮತ್ತು ಚಾಮರಾಜನಗರ
ಸರ್ಕಾರದ ಉದ್ದೇಶವೇನು?
ಮಳೆಗಾಲದಲ್ಲಿ ಉಂಟಾಗುವ ಹಾನಿಗಳಿಗೆ ತಕ್ಷಣವೇ ಸ್ಪಂದಿಸುವುದು, ಜಿಲ್ಲಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಮತ್ತು ಪರಿಹಾರ ಕಾರ್ಯಗಳಲ್ಲಿ ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಮುಖ್ಯಮಂತ್ರಿಯವರ ಅನುಮೋದನೆಯ ಮೇರೆಗೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು ಈ ಆದೇಶವನ್ನು ಹೊರಡಿಸಿದೆ. ಈ ಕ್ರಮವು ಜಿಲ್ಲಾ ಮಟ್ಟದಲ್ಲಿ ಆಡಳಿತ ಯಂತ್ರವನ್ನು ಚುರುಕುಗೊಳಿಸಲಿದ್ದು, ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರದ ನೆರವು ಶೀಘ್ರವಾಗಿ ತಲುಪಲು ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!