ನವದೆಹಲಿ : ಶೃಂಗೇರಿ ಅಂಚೆ ಮತ ವಿವಾದ: ರಾಜೇಗೌಡ ಅವರ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ.
news.ashwasurya.in
ಶೃಂಗೇರಿ ಕ್ಷೇತ್ರದ ಅಂಚೆ ಮತ ವಿವಾದಕ್ಕೆ ಸಂಭವಿಸಿದಂತೆ ರಾಜೇಗೌಡ ಅವರ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ..
ಅಶ್ವಸೂರ್ಯ/ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಾಜಿ ಶಾಸಕ ಟಿ.ಡಿ. ರಾಜೇಗೌಡ ಅವರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಈ ಅರ್ಜಿಯನ್ನು ಮೇ 11ರಂದು ತುರ್ತು ವಿಚಾರಣೆಗೆ ಪಟ್ಟಿ ಮಾಡಲು ಒಪ್ಪಿಗೆ ನೀಡಿದೆ.
2023ರ ಚುನಾವಣೆಯಲ್ಲಿ ರಾಜೇಗೌಡ ಅವರು ಡಿ.ಎನ್. ಜೀವರಾಜ್ ಅವರ ವಿರುದ್ಧ 201 ಮತಗಳ ಅಂತರದಿಂದ ಜಯಗಳಿಸಿದ್ದರು. ಆದರೆ, ಜೀವರಾಜ್ ಅವರು ಚುನಾವಣಾ ಅಕ್ರಮಗಳ ಆರೋಪ ಹೊರಿಸಿ ಅಂಚೆ ಮತಗಳ ಮರು ಎಣಿಕೆಗೆ ಕೋರಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ್ದ ಹೈಕೋರ್ಟ್, ತಿರಸ್ಕೃತಗೊಂಡಿದ್ದ 279 ಅಂಚೆ ಮತಗಳನ್ನು ಮರು ಪರಿಶೀಲಿಸಿ ಎಣಿಕೆ ಮಾಡುವಂತೆ ಸೂಚಿಸಿತ್ತು.
ಕಳೆದ ಶನಿವಾರ ನಡೆದ ಈ ಮರು ಎಣಿಕೆಯ ಪ್ರಕ್ರಿಯೆಯಲ್ಲಿ ರಾಜೇಗೌಡ ಅವರ ಕೆಲವು ಮತಗಳು ಅಸಿಂಧುಗೊಂಡಿದ್ದರಿಂದ, ಜೀವರಾಜ್ ಅವರು 52 ಮತಗಳ ಮುನ್ನಡೆ ಸಾಧಿಸಿ ವಿಜಯಿ ಎಂದು ಘೋಷಿತರಾಗಿದ್ದರು.

ಈ ಬೆಳವಣಿಗೆಯಿಂದ ರಾಜೇಗೌಡ ಅವರ ಶಾಸಕ ಸ್ಥಾನಕ್ಕೆ ಧಕ್ಕೆ ಉಂಟಾಗಿದ್ದು, ಹೈಕೋರ್ಟ್ ಆದೇಶದಲ್ಲಿ ಲೋಪವಿದೆ ಎಂದು ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ತಡೆಯಾಜ್ಞೆ ನೀಡುವ ಸಂಪ್ರದಾಯವಿದ್ದರೂ, ಸದ್ಯಕ್ಕೆ ಸುಪ್ರೀಂ ಕೋರ್ಟ್ ಮೇಲ್ಮನವಿಯನ್ನು ಕೂಲಂಕಷವಾಗಿ ಪರಿಶೀಲಿಸುವುದಾಗಿ ತಿಳಿಸಿದೆ. ಮೇ.11 ಸೋಮವಾರ ನಡೆಯಲಿರುವ ಈ ವಿಚಾರಣೆಯು ಶೃಂಗೇರಿ ಕ್ಷೇತ್ರದ ಶಾಸಕರು ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಅಂತಿಮ ತೆರೆ ಎಳೆಯುವ ಸಾಧ್ಯತೆಯಿದೆ.


