
ಮಂಡ್ಯ :ಬಾಲ ಗರ್ಭಿಣಿಯರಿಗೆ ಕಾನೂನು ಬಾಹಿರ ಸ್ಕ್ಯಾನಿಂಗ್; ಮೂವರು ವೈದ್ಯರು ಬಂಧನ-12 ಎಫ್ ಐಆರ್ ದಾಖಲು.!
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ಬಾಲ ಗರ್ಭಿಣಿಯರಿಗೆ (18 ವರ್ಷದೊಳಗಿನವರು) ಕಾನೂನು ಬಾಹಿರವಾಗಿ ಭ್ರೂಣ ಲಿಂಗ ಪತ್ತೆ ಸ್ಕ್ಯಾನಿಂಗ್ ನಡೆಸುತ್ತಿದ್ದ ದಂಧೆಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದಾರೆ. 31ಕ್ಕೂ ಹೆಚ್ಚು ಬಾಲಕಿಯರಿಗೆ ಅಕ್ರಮ ಸ್ಕ್ಯಾನಿಂಗ್ ಮಾಡಿದ ಆರೋಪದ ಮೇಲೆ ಮೂವರು ವೈದ್ಯರನ್ನು ಬಂಧಿಸಲಾಗಿದೆ ಮತ್ತು 12ಕ್ಕೂ ಹೆಚ್ಚು ಎಫ್ಐಆರ್ (FIR) ದಾಖಲಿಸಲಾಗಿದೆ….
news.ashwasurya.in
ಅಶ್ವಸೂರ್ಯ/ಮಂಡ್ಯ : ಹನ್ನೆರಡು ಎಫ್ಐಆರ್ ದಾಖಲಾದ ಆಧಾರದ ಮೇಲೆ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನಲ್ಲಿ ಖಾಸಗಿ ಕ್ಲಿನಿಕ್ ಗಳ ಮೂವರು ವೈದ್ಯರನ್ನು ಬಂಧಿಸಲಾಗಿದೆ.

ಡಾ. ಹರೀಶ್, ಡಾ. ದಿವ್ಯಾ ಚೇತನಾ ಮತ್ತು ಡಾ. ಹರ್ಷಿತ್ ಇವರುಗಳನ್ನು ಭ್ರೂಣಲಿಂಗ ಪತ್ತೆಗಾಗಿ 31 ಬಾಲ ಗರ್ಭಿಣಿಯರಿಗೆ ಕಾನೂನುಬಾಹಿರವಾಗಿ ಸ್ಕ್ಯಾನಿಂಗ್ ಮಾಡಿರುವ ಆರೋಪದ ಮೇರೆಗೆ ಮೂವರು ವೈದ್ಯರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪೋಕ್ಸೋ ಕಾಯ್ದೆಯಡಿ ಪೊಲೀಸ್ ದೂರುಗಳನ್ನು ದಾಖಲಿಸದೆ ಗರ್ಭಿಣಿ ಅಪ್ರಾಪ್ತ ವಯಸ್ಕರ ಮೇಲೆ ಸ್ಕ್ಯಾನಿಂಗ್ ನಡೆಸುವುದು ಮತ್ತು ಗರ್ಭಿಣಿ ಮಹಿಳೆಯರಿಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತ ದೂರು ದಾಖಲಿಸಿದ್ದರು. ಇದರ ಆಧಾರದ ಮೇಲೆ ಸಮನ್ಸ್ ನೀಡಲಾಗಿತ್ತು. 12 ಎಫ್ಐಆರ್ಗಳ ಆಧಾರದ ಮೇಲೆ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನಲ್ಲಿ ಖಾಸಗಿ ಕ್ಲಿನಿಕ್ ಗಳ ಮೂವರು ವೈದ್ಯರನ್ನು ಬಂಧಿಸಲಾಗಿದೆ.

ಕೆ.ಆರ್.ಪೇಟೆಯ ಚೇತನ ಮೆಟರ್ನಿಟಿ ಸೆಂಟರ್ನ ಡಾ.ದಿವ್ಯಾ ಚೇತನ, ನಾವಿ ಡಯಾಗ್ನಸ್ಟಿಕ್ ಸೆಂಟರ್ನ ಡಾ.ಹರ್ಷಿತ್ ಮತ್ತು ಕುಶಾಲ್ ಡಯಾಗ್ನಸ್ಟಿಕ್ ಸೆಂಟರ್ನ ಡಾ.ಹರೀಶ್ ಬಂಧಿತರು. ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಪ್ರಿಯಾಂಕಾ ತಲೆಮರೆಸಿ ಕೊಂಡಿದ್ದು, ಪೊಲೀಸರು ಅವರ ಬಂಧನಕ್ಕಾಗಿ ಶೋಧ ಮುಂದುವರಿಸಿದ್ದಾರೆ ಎಂದು ನ್ಯಾಯಮೂರ್ತಿ ಬಿ. ವೀರಪ್ಪ ತಿಳಿಸಿದ್ದಾರೆ.

ಈ ವೈದ್ಯರ ಕೃತ್ಯಗಳನ್ನು ಸಮಾಜದಲ್ಲಿ ನಡೆಯುತ್ತಿರುವ ಘೋರ ಅಪರಾಧ ಎಂದು ಬಣ್ಣಿಸಿದ ನ್ಯಾಯಮೂರ್ತಿ ವೀರಪ್ಪ, ಕೆ.ಆರ್. ಪೇಟೆ ತಾಲ್ಲೂಕಿನಲ್ಲಿ ಮಾತ್ರ 12 ಎಫ್ಐಆರ್ಗಳ ನೋಂದಣಿ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿದರು. ಮಂಡ್ಯ ಜಿಲ್ಲೆಯ ಇತರ ಆರು ತಾಲ್ಲೂಕುಗಳಲ್ಲಿ ಇದೇ ರೀತಿಯ ಪ್ರಕರಣಗಳ ತನಿಖೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲವೂ ಬಯಲಾಗಲಿದೆ ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ಆಗಲಿದೆ…


